ಗಂಟು ನೊಣ

ಕೀಟವರ್ಗದ ಸಸಿಡೊಮೈಯಿಡೀ ಕುಟುಂಬದ ಕೀಟಗಳಿಗಿರುವ ಸಾಮಾನ್ಯ ಹೆಸರು. ವಿವಿಧ ಬಗೆಯ ಸಸ್ಯಗಳಿಗೆ ಅಂಟಿ ಗಂಟುಗಳನ್ನು ಉಂಟುಮಾಡುವುದರಿಂದ ಈ ಹೆಸರು. ಸೊಳ್ಳೆಗಳನ್ನು ಹೋಲುತ್ತದೆ. ಅನೇಕ ಬಗೆಯ ಗಂಟು ನೊಣಗಳಿವೆ. ಉದ್ದವಾದ ಮಣಿಸರದಂತಿರುವ ಕುಡಿಮೀಸೆಗಳು, ಮೀಸೆಗಳ ಮೇಲೆ ಇರುವ ಬಿರುಸುಕೂದಲು, ಸರಳರೀತಿಯ ಕಾಂಡಗಳುಳ್ಳ ಎರಡು ರೆಕ್ಕೆಗಳು ಇವುಗಳ ವಿಶೇಷ ಲಕ್ಷಣಗಳು.

	ಪ್ರೌಢಕೀಟಗಳು ಸಸ್ಯಾಹಾರಿಗಳು. ಕೆಲವು ಪ್ರಭೇದಗಳು ಆರ್ಥಿಕ ಮಹತ್ತ್ವವಿರುವ ಹಲವಾರು ¸ಸ್ಯಗಳ ಮೇಲೆ ಪರಾವಲಂಬಿಗಳಾಗಿದ್ದು ಗಂಟುಗಳ ಉತ್ಪನ್ನಕ್ಕೆ ಕಾರಣವಾಗುತ್ತವೆ. ಆದರೆ ಇವುಗಳ ಡಿಂಬಗಳು ತಮ್ಮ ಆಹಾರ ಸೇವನೆಯಲ್ಲಿ ಪ್ರೌಢ ಕೀಟಗಳಿಂದ ಬೇರೆಯಾಗಿವೆ.  ಕೆಲವು ಬಗೆಗಳ ಡಿಂಬಗಳು ಬೇರೆ ಬಗೆಯ ಕೀಟಗಳನ್ನು ಮುಖ್ಯವಾಗಿ ತಿಗಣೆ ಮತ್ತು ನುಸಿಗಳನ್ನು ತಿನ್ನುತ್ತವೆ. ಇನ್ನು ಕೆಲವು ಬಗೆಯ ಡಿಂಬಗಳು, ಕೊಳೆಯುತ್ತಿರುವ ಸಸ್ಯಗಳನ್ನು ತಿಂದು ಜೀವಿಸುತ್ತವೆ. 

	ಗಂಟು ನೊಣಗಳಲ್ಲಿ ಬಹಳ ಮುಖ್ಯವಾದವು ಮತ್ತು ವಿಶೇಷವಾಗಿ ಹಾನಿಕಾರಕವಾದವುಗಳೆಂದರೆ ಹೆಸ್ಸಿಯನ್ ನೊಣದ ಮರಿ. ಉತ್ತರ ಅಮೆರಿಕ, ಯೂರೋಪ್ ಮತ್ತು ನ್ಯೂಜೀóಲೆಂಡ್ ಮುಂತಾದ ದೇಶಗಳಲ್ಲಿ ಗೋಧಿ ಬೆಳೆಯನ್ನು ನಾಶಮಾಡುತ್ತವೆ. ಯೂರೋಪಿನಲ್ಲಿ ಪಿಯರ್ ಹಣ್ಣಿಗೆ ಬಹಳ ಹಾನಿಕಾರಕವಾಗಿದೆ. ಹೀಗೆಯೆ ಜೋಳದ ತೆನೆಯ ನೊಣವಾದ ಕಾಂಟರಿನಿಯ ಆಂಡ್ರೋಪೂಗೋನಿಸ್ ದಕ್ಷಿಣ ಭಾರತದ ಪೈರಿಗೆ ಹಾನಿಯನ್ನುಂಟುಮಾಡುತ್ತದೆ. 				(ಜೆ.ಪಿ.ಸಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ